ಪದ್ಮಪಾಣಿ
	ಮಹಾಯಾನಧರ್ಮದ ಐವರು ಬೋಧಿಸತ್ತ್ವರಲ್ಲಿ ಒಬ್ಬನಾದ ಅವಲೋಕಿತೇಶ್ವರನಿಗೆ ಈ ಹೆಸರಿದೆ. ಈ ಧರ್ಮದಲ್ಲಿ ಆದಿಬುದ್ಧನಿಂದ ವೈರೋಚನ, ಅಕ್ಷೋಭ್ಯ, ರತ್ನಸಂಭವ, ಅಮಿತಾಭ, ಅಮೋಘಸಿದ್ಧ ಎಂಬ ಐವರು ಧ್ಯಾನಿಬುದ್ಧರು ಆವಿರ್ಭವಿಸುತ್ತಾರೆಂದೂ ಪ್ರವೃತ್ತಿಯಲ್ಲಿರುವ ಈ ಧ್ಯಾನಿಬುದ್ಧರಿಂದ ಕ್ರಮವಾಗಿ ಸಮಂತಭದ್ರ, ವಜ್ರಪಾಣಿ, ಪದ್ಮಪಾಣಿ ಮತ್ತು ವಿಶ್ವಪಾಣಿ ಎಂಬ ಬೋಧಿಸತ್ತ್ವರು ಉದ್ಭವಿಸುತ್ತಾರೆಂದೂ ಕಲ್ಪನೆ. ಪದ್ಮಪಾಣಿಯೇ ಅವಲೋಕಿತೇಶ್ವರನೆನಿಸಿಕೊಳ್ಳುತ್ತಾನೆ. ಕರುಣೆಯೇ ಮುಖ್ಯರಸವಾಗಿ ಉಳ್ಳ ಪದ್ಮಪಾಣಿ-ಅವಲೋಕಿತೇಶ್ವರನ ಜಪಾನೀರೂಪ ಕ್ವನ್ನೊನ್ ಚೀನದಲ್ಲಿ ಕುಆನ್-ಯಿನ್ ಎನಿಸಿದೆ. ಅಲ್ಲಿ ಈ ಅವರಾತವನ್ನು ಸಾಮಾನ್ಯವಾಗಿ ಸ್ತ್ರೀಯರಂತೆ ಚಿತ್ರಿಸಲಾಗುತ್ತದೆ. ಭಾರತದಲ್ಲಿ ಇದು ಪುರಷಮೂರ್ತಿ. ಪದ್ಮಪೀಠದ ಮೇಲಿದ್ದು ಎಡಗೈಯಲ್ಲಿ ದೀರ್ಘದಂಡದ ತಾವರೆ ಹೂವನ್ನು ಹಿಡಿದು ಶುದ್ಧ ಧ್ಯಾನದಲ್ಲಿರುವ ಗಂಭೀರಮೂರ್ತಿಯಂತೆ ಪದ್ಮಪಾಣಿಯನ್ನು (ಧ್ಯಾನಿ ಬೋಧಿಸತ್ತ್ವ) ರೂಪಿಸಿರುತ್ತಾರೆ. ಉಪೇಕ್ಷೆ, ಕರುಣೆಗಳು ಈ ಮೂರ್ತಿಯ ಮುಖ್ಯಲಕ್ಷಣಗಳೆಂದು ತಂತ್ರದಲ್ಲಿ ನಿರೂಪಣೆ ಮಾಡಲಾಗಿದೆ. ನಿರ್ವಾಣವನ್ನು ನಿರಾಕರಿಸುತ್ತಿರುವುದು ಉಪೇಕ್ಷೆ ; ಅದಕ್ಕೆ ಕಾರಣವಾಗಿ ಜೀವಿಗಳ ಮೇಲಿನ ಅನುಕಂಪವೇ ಕರುಣೆ. ಚೀನೀ ಜಪಾನೀ ಟಿಬೆಟಿನ್ ಕಲೆಗಳಲ್ಲಿ ಅಸಂಖ್ಯಾತ ಪದ್ಮಪಾಣಿ ಚಿತ್ರಣಗಳಿವೆ. ಎಡಗೈಯಲ್ಲಿ ಪದ್ಮವನ್ನು ಹಿಡಿದು, ಬಲಗೈ ವರದಾನ ಮುದ್ರೆಯಲ್ಲಿದ್ದು ತ್ರಿಭಂಗಿಯಲ್ಲಿರುವ ಈ ಬೋಧಿಸತ್ತ್ವನ ಸೊಗಸಾದ ವರ್ಣಚಿತ್ರವೊಂದು ಅಜಂತ ಗುಹಾಂತರ ದೇವಾಲಯದಲ್ಲಿರುವುದು ಜಗತ್ಪ್ರಖ್ಯಾತವಾಗಿದೆ.
(ನೋಡಿ- ಅವಲೋಕಿತೇಶ್ವರ)									(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ